ಕರ್ನಾಟಕದ ಹೆಮ್ಮೆಯ ಕಲಾವಿದ ಡಾ. ಎಸ್. ಎಂ. ಪಂಡಿತ್


ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ ಆಫ್ ಆರ್ಟ್‌ನಲ್ಲಿ ಪದವಿ ಪಡೆದ ಪಂಡಿತ್ ಅವರು ನಂತರ ಮುಂಬಯಿನ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್‌ಗೆ ಸೇರಿದರು. ಅಲ್ಲಿ ಅನೇಕ ಶ್ರೇಷ್ಠ ಕಲಾವಿದರ ಸಂಪರ್ಕ ಅವರ ಕೌಶಲ್ಯವನ್ನು ಒರೆಗೆ ಹಚ್ಚಿತು.

ಜಾಹೀರಾತು ಮತ್ತು ಚಲನಚಿತ್ರ ಕ್ಷೇತ್ರಗಳ ವಾಣಿಜ್ಯ ಕಲೆಯಲ್ಲಿ ತಮ್ಮ ಛಾಪು ಮೂಡಿಸಿದ ಪಂಡಿತ್‌ಜಿ ಅವರ ಕೈಚಳಕದಿಂದ ಹಲವಾರು ನಟಿಯರು ವಾಸ್ತವವಾಗಿ ಇರುವುದಕ್ಕಿಂತಲೂ ಹೆಚ್ಚು ಆಕರ್ಷಕವಾಗಿ ಪೋಸ್ಟರುಗಳಲ್ಲಿ ಕಂಗೊಳಿಸಿದರು. 'ಫಿಲ್ಮ್‌ಇಂಡಿಯಾ'ದ ಓದುಗರು ಇವರ ಮುಖಪುಟ ವಿನ್ಯಾಸಕ್ಕೆ ಮಾರುಹೋದರು. 1946ರಲ್ಲಿ ಕೆನಡಾದ ಟೊರೆಂಟೋನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಪದಕ ಪಡೆದ ಹೆಗ್ಗಳಿಕೆ ಇವರದು. ನ್ಯೂಯಾರ್ಕ್‌ನ ಆರ್ಟ್ ಗ್ಯಾಲರಿಯಲ್ಲಿ ಇವರ ಕಲಾ ಕೃತಿಗಳ ಪ್ರದರ್ಶನವಿದೆ.


ಕನ್ಯಾಕುಮಾರಿಯಲ್ಲಿ ಅವರು ರಚಿಸಿದ ಸ್ವಾಮಿ ವಿವೇಕಾನಂದರ ಆಳೆತ್ತರದ ಚಿತ್ರ ಲಲಿತ ಕಲೆಗೆ ಅವರು ನೀಡಿದ ಅಪೂರ್ವ ಕೊಡುಗೆಯೆಂದೇ ಪರಿಗಣಿಸಲಾಗುತ್ತಿದೆ.

ಲಂಡನ್ ಹಾಗೂ ಮ್ಯಾಂಚೆಸ್ಟರ್ ನಲ್ಲಿ 1978ರಲ್ಲಿ ಪುರಾಣ ಆಧಾರಿತ ಚಿತ್ರಕಲಾ ಪ್ರದರ್ಶನ ಪಂಡಿತ್‌ಜಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿತು. ಅವರನ್ನು ಲಂಡನ್‌ನ ರಾಯಲ್ ಸೊಸೈಟಿ ಆಫ್ ಆರ್ಟ್‌ನ ಸದಸ್ಯರನ್ನಾಗಿಯೂ ಆಯ್ಕೆ ಮಾಡಲಾಯಿತು. ಅವರ ಕಲಾಕೃತಿಗಳು ಇಂದು ದೇಶ ವಿದೇಶಗಳ ನೂರಾರು ಗಣ್ಯರ ಮನೆಗಳನ್ನು ಅಲಂಕರಿಸಿದೆ. ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 1984ರಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರನ್ನು ಸರ್ಕಾರವು ಸನ್ಮಾನಿಸಿತು. 1986ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವು ಅವರಿಗೆ ಡಿ.ಲಿಟ್. ಪದವಿ ನೀಡಿ ಗೌರವಿಸಿತು.
ಜನವರಿ 7ರಂದು ಲೋಕಾರ್ಪಣೆಯಾಗುತ್ತಿರುವ ಗುಲ್ಬರ್ಗದ ರಂಗಮಂದಿರಕ್ಕೆ ಡಾ. ಎಸ್.ಎಂ. ಪಂಡಿತ್ ಅವರ ಹೆಸರಿಟ್ಟಿರುವುದು ಗುಲ್ಬರ್ಗದ ಸಾಂಸ್ಕೃತಿಕ ಹಿರಿಮೆಗೆ ಸಂದ ಗೌರವವೇ ಆಗಿದೆ.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...