ವೈಜ್ಞಾನಿಕ ಮನೋಧರ್ಮ ಎಂದರೇನು?

ವೈಜ್ಞಾನಿಕ ಮನೋಧರ್ಮನಮ್ಮ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆಯೋ ನಾವಷ್ಟೇ ಕಂದಾಚಾರಿಗಳಾಗಿ ಹಿಂದುಳಿಯಲು ಬಯಸುತ್ತಿದ್ದೇವೆ. ಕಂದಾಚಾರ ಎನ್ನುವ ಪದವನ್ನು ಕೇವಲ ಅರ್ಥಹೀನ ಆಚರಣೆ ಎಂಬುದಕ್ಕಷ್ಟೇ ಸೀಮಿತಗೊಳಿಸದೆ, ಮೌಢ್ಯ (ಅಜ್ಞಾನ), ಮೂಢನಂಬಿಕೆಗಳ ಮೇಲೆ ಅಚಲ ವಿಶ್ವಾಸ ಮತ್ತು ಕುರುಡುಭಕ್ತಿ, ತನ್ನದಲ್ಲದ ಯಾವ ಚಿಂತನೆಯನ್ನೂ ಒಪ್ಪದೆ ನಿರಾಕರಿಸುವುದು, ಹಾಗೆ ನಿರಾಕರಿಸಲು ವಿತಂಡವಾದ ಒಡ್ಡುತ್ತ ತನ್ನ ಮೂಗಿನ ನೇರಕ್ಕೆ ಕಾರಣಗಳನ್ನು ಕೊಡುವುದು, ವಿಜ್ಞಾನದ ಆಳಜ್ಞಾನ ಇಲ್ಲದಿರುವುದು, ವಿಜ್ಞಾನ ಗೊತ್ತಿದ್ದರೂ ಅರ್ಧಸತ್ಯಗಳನ್ನಷ್ಟೇ ಹೇಳುವುದು, ಒಂದೇ ವಿಷಯದ ಬಗ್ಗೆ ಎರಡುಮೂರು ಸಿದ್ಧಾಂತಗಳಿದ್ದಾಗ, ಅವುಗಳಲ್ಲಿ ಒಂದು ಮಾತ್ರ ನಿಜ ಎಂದು ಯಾವ ಪರೀಕ್ಷೆಗಳಿಲ್ಲದೆ ನಂಬುವುದು – ಇವೆಲ್ಲವೂ ಇರುವ ಒಂದು ಸಂಕೀರ್ಣ ಮನಸ್ಥಿತಿಗೆ ಸಮೀಕರಿಸಲು ಬಳಸಬಹುದಾದ ವಿಶಾಲಾರ್ಥದ ಪದವಾಗಿ ತೆಗೆದುಕೊಂಡಿದ್ದೇನೆ.
ಮೊದಲಿಗೆ “ವೈಜ್ಞಾನಿಕ” ಎಂದರೆ ಏನೆಂದು ನೋಡೋಣ. ವಿಜ್ಞಾನದ ತಳಹದಿ ಇರುವಂಥಾದ್ದು ವೈಜ್ಞಾನಿಕ. ವ್ಯಕ್ತಿಗೆ ಅಥವಾ ಸಮಾಜಕ್ಕೆ ಕೇವಲ ವೈಜ್ಞಾನಿಕ ದೃಷ್ಟಿಯೊಂದೇ ಇರಬೇಕು ಎನ್ನುವ ಯಾವ ನಿಬಂಧನೆಯೂ ಇಲ್ಲ. ವೈಜ್ಞಾನಿಕವಲ್ಲದ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತ ಮತ್ತು ಜೀವನದಲ್ಲಿ ಇರಬಹುದು. ಉದಾಹರಣೆಗೆ ಸಾಹಿತ್ಯ. ಒಂದು ಒಳ್ಳೆಯ ಸಾಹಿತ್ಯ (ಇದು ದ್ವಿರುಕ್ತಿ. “ಸಾಹಿತ್ಯ” ಅಂದರೇನೇ “ಹಿತವನ್ನುಂಟುಮಾಡುವಂಥದ್ದು”!) ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ; ಕೆಟ್ಟಸಾಹಿತ್ಯ ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಮಾಡುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ಸಾಧಿಸಬಹುದೇನೋ. ಆದರೆ, ಅದೆಲ್ಲವನ್ನು ಆಳವಾಗಿ ಅಭ್ಯಾಸ ಮಾಡಿ ಯಾರೂ ಸಾಹಿತ್ಯ ಬರೆಯುವುದಿಲ್ಲ. ಲೇಖಕ ಮತ್ತು ಓದುಗ – ವಿಜ್ಞಾನದ ಯಾವ ತಲೆಬಿಸಿ ಇಲ್ಲದೆ ಬರೆಯುವ ಮತ್ತು ಓದುವ ಕ್ರಿಯೆಯನ್ನು ಮಾಡಬಹುದು. ಹಾಗಾಗಿ, ಸಾಹಿತ್ಯ ವೈಜ್ಞಾನಿಕತೆಯ ಛತ್ರಿಯಡಿ ಬರಬೇಕಾಗಿಲ್ಲ. ಇನ್ನು, ನಂಬಿಕೆಗಳು – ಇವೂ ಅಷ್ಟೆ, ವೈಜ್ಞಾನಿಕವಾಗಿರಬೇಕಾಗಿಲ್ಲ. ಉದಾಹರಣೆಗೆ ದೀಪಾವಳಿಗೆ ಪಟಾಕಿ ಹೊಡೆಯುತ್ತೇವೆ; ಯುಗಾದಿಗೆ ಬೇವುಬೆಲ್ಲ ತಿನ್ನುತ್ತೇವೆ; ರಂಜಾನ್ ತಿಂಗಳು ಉಪವಾಸವಿರುತ್ತೇವೆ, ಕ್ರಿಸ್‍ಮಸ್‍ಗೆ ಸಾಂತಾಕ್ಲಾಸ್‍ನ ಆಟ ಆಡುತ್ತೇವೆ. ಇವೆಲ್ಲ ಮನುಷ್ಯ ತನ್ನನ್ನು ಖುಷಿಯಾಗಿಟ್ಟುಕೊಳ್ಳಲು ಅಥವಾ ಹಬ್ಬಕ್ಕೆ ವಿಶೇಷತೆಯ ಮೆರುಗು ಕೊಡಲು ಅಳವಡಿಸಿಕೊಂಡಿರಬಹುದಾದ ಆಚರಣೆಗಳು. ಇವನ್ನು ವೈಜ್ಞಾನಿಕತೆಯ ನೆಲೆಯಲ್ಲಿ ನೋಡಬೇಕಾಗಿಲ್ಲ. ದೇವರು – ಎಂಬ ಕಲ್ಪನೆ – ಇದೂ ಅಷ್ಟೆ. ಮನುಷ್ಯನಿಗೆ ಹಲವು ಸಹಸ್ರವರ್ಷಗಳಿಂದ ಸದಾ ಕಾಡುವ ಸಂಗತಿಯಾಗಿ ನಿಂತಿರುವ “ದೇವರು” ಎಂಬ ಪರಿಕಲ್ಪನೆಯನ್ನು ಕೂಡ ವಿಜ್ಞಾನದಡಿ ತರಬೇಕಾಗಿಲ್ಲ. ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದನ್ನು ಪ್ರೂವ್ ಮಾಡುವುದು ವಿಜ್ಞಾನದ ಗುರಿ ಅಲ್ಲ. ಒಂದು ಸಂಗತಿ ವಿಜ್ಞಾನದ ಪರಿಧಿಗೆ ಬರುವುದಿಲ್ಲ; ವೈಜ್ಞಾನಿಕ ಅಲ್ಲ ಎನ್ನುವುದರಿಂದಲೇ ಅದರ ಮೌಲ್ಯನಿರ್ಣಯ ಆಗಿಹೋಗುವುದಿಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ವೈಜ್ಞಾನಿಕ ಅಲ್ಲದ್ದು ಅವೈಜ್ಞಾನಿಕ ಸರಿ. ಆದರೆ ನಾವಿಂದು ಕೊಟ್ಟಿರುವ ಮೂಢ, ಬುದ್ಧಿಯಿಲ್ಲದ ಎಂಬರ್ಥದಲ್ಲಿ ಅಲ್ಲ. ಮ್ಯಾರಥಾನ್ ಓಡುವ ಹಿಂದಿನ ದಿನ ಏನೇನು ಆಹಾರ ತೆಗೆದುಕೊಳ್ಳಬೇಕೆಂಬ ವಿಷಯದಲ್ಲಿ ವೈಜ್ಞಾನಿಕನಾದ ನಾನು, ಹಬ್ಬಕ್ಕೆ ಒಬ್ಬಟ್ಟು ತಿನ್ನುವ ವಿಚಾರ ಬಂದಾಗ ವಿಜ್ಞಾನದ ಬಗ್ಗೆ ತಲೆಕೆಡಿಸಿಕೊಳ್ಳದ ಅವೈಜ್ಞಾನಿಕನಾಗುತ್ತೇನೆ.
ನಾನಿನ್ನು ಹೇಳಹೊರಟ ವಿಚಾರಕ್ಕೆ ತಳಹದಿಯಾಗಿ ಕೆಲಸ ಮಾಡುವುದರಿಂದ ಈ ಮೇಲೆ ಹೇಳಿದ ಮಾತುಗಳು ತುಂಬ ಮುಖ್ಯ. ಅಲ್ಲಿನ ಸಾರಾಂಶವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ನಮ್ಮ ಯೋಚನೆ, ಚಿಂತನೆಗಳಲ್ಲಿ ಮುಖ್ಯವಾಗಿ ಮೂರು ಶಾಖೆಗಳಿವೆ – ವೈಜ್ಞಾನಿಕ, ಅವೈಜ್ಞಾನಿಕ ಮತ್ತು ಮೂಢ. ವಿಜ್ಞಾನದ ಸೂತ್ರ, ಸಮೀಕರಣ, ಪ್ರಯೋಗಗಳಿಗೆ ಅಳವಡಿಸಬಹುದಾದ್ದು ವೈಜ್ಞಾನಿಕ. ಅಂತಹ ಯಾವ ಸೂತ್ರ, ಪ್ರಯೋಗಗಳ ಹಂಗಿಲ್ಲದೆಯೂ ಸ್ವತಂತ್ರವಾಗಿ ಅಸ್ತಿತ್ವದಲ್ಲಿರಬಹುದಾದ್ದು ಅವೈಜ್ಞಾನಿಕ. ವಿಜ್ಞಾನದ ಸೂತ್ರಪ್ರಯೋಗಗಳನ್ನು ಹಾಕಿದಾಗ ಸಂಪೂರ್ಣವಾಗಿ ತಪ್ಪೆಂದು ರುಜುವಾತುಪಡಿಸಬಹುದಾದ ಸಂಗತಿ ಮೌಢ್ಯ. ಇವಿಷ್ಟು ಸರಿಯಾಗಿ ಅರ್ಥವಾದರೆ ನಾವು ಅರ್ಧದಾರಿ ಕ್ರಮಿಸಿಬಿಟ್ಟಾಯಿತು ಎಂದು ತಿಳಿಯಬಹುದು!
ವಿಜ್ಞಾನಿ ಅಂದರೆ ಯಾರು? ನಾವಿಂದು ಸೈಂಟಿಸ್ಟ್ ಎಂಬ ಪದಕ್ಕೆ ಬೇರಾವ ಪರ್ಯಾಯಶಬ್ದ ಸಿಕ್ಕದೆ “ವಿಜ್ಞಾನಿ”ಯನ್ನು ಬಳಸುತ್ತಿದ್ದೇವೆ. ಆದರೆ, ನಿಜವಾಗಿ ನೋಡಿದರೆ, ವಿಜ್ಞಾನವನ್ನು ನಂಬಿ ನಡೆಯುವವನು, ಅದರಲ್ಲಿ ಹೆಚ್ಚು ಶ್ರಮ ಇರುವವನು, ವಿಜ್ಞಾನದ ಮಾರ್ಗವನ್ನು ಸತ್ಯಾನ್ವೇಷಣೆಗೆ ಆರಿಸಿಕೊಳ್ಳುವವನು, ಯಾರೇ ಇರಲಿ, ವಿಜ್ಞಾನಿಯೇ. ಚರ್ಮವನ್ನು ಎಷ್ಟು ಬಿಸಿಯಲ್ಲಿ ಕಾಯಿಸಿದರೆ ಚಪ್ಪಲಿಗೆ ಬೇಕಾದ ಹದ ಸಿಗುತ್ತದೆ ಎನ್ನುವುದನ್ನು ಅನುಭವದಿಂದ ಕಲಿತ ಚಮ್ಮಾರ, ಫಿಸಿಕ್ಸ್ ಕಲಿಯದೆ ಇದ್ದರೂ ಪಿಟೀಲಿಗೆ ತಂತಿ ಕೂಡಿಸಿ ಕೊಡಬಲ್ಲ ವಾದ್ಯತಯಾರಕ, ಯಾವ ವರ್ಷ ಕಾಡಿನ ಯಾವ ಮರದಲ್ಲಿ ಜೇನು ತೊನೆಯುತ್ತದೆ ಎನ್ನುವುದನ್ನು ಅಂದಾಜು ಮಾಡಬಲ್ಲ ಕಾಡುಸಿದ್ದ – ಇವರೆಲ್ಲರೂ ವಿಜ್ಞಾನಿಗಳೇ. ಯಾಕೆಂದರೆ, ಇವರೆಲ್ಲ ತಮ್ಮ ನಿರ್ಣಯಕ್ಕೆ ಯಾವುದೋ ಒಂದು ತರ್ಕವನ್ನು ಅವಲಂಬಿಸಿದ್ದಾರೆ. ಆ ತರ್ಕದ ವೈಜ್ಞಾನಿಕ ಹಿನ್ನೆಲೆ ಅವರಿಗೆ ಗೊತ್ತಿಲ್ಲದಿರಬಹುದು, ಆದರೆ ಒಬ್ಬ ನಿಜವಾದ ಸೈಂಟಿಸ್ಟ್ ಅವರ ಈ ತರ್ಕಕ್ಕೆ ಕಾರಣಗಳೇನು, ಯಾವುದು ಆಧಾರ ಎನ್ನುವುದನ್ನು ತರ್ಕಬದ್ಧವಾಗಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಪರೀಕ್ಷಿಸಿನೋಡಬಹುದು. ಆ ಗುಟ್ಟು ಗೊತ್ತಾದ ಮೇಲೆ, ಅದೇ ತರ್ಕವನ್ನು ಬಳಸಿ ಬೇರೆಯವರು ಕೂಡ ಇವರದೇ ದಾರಿಯಲ್ಲಿ ಸಾಗಿದರೆ, ಅವವೇ ಫಲಿತಾಂಶಗಳು ಸಿಗುತ್ತವೆ.
ಅಂದರೆ, ಅತ್ಯಂತ ನಿಖರವಾದ ಮತ್ತು ಪುನರಾವರ್ತಿಸಿ ನೋಡಬಹುದಾದ ತರ್ಕಶುದ್ಧ ವಿನ್ಯಾಸ ಇದೆ ಎನ್ನುವುದು ವಿಜ್ಞಾನದ ಒಂದು ಮೂಲಾಂಶ. ವಿಜ್ಞಾನ ಬೆಳೆದಿರುವುದು ಕೂಡ ಹೀಗೆಯೇ ಅಲ್ಲವೆ? ನ್ಯೂಟನ್ ಸೇಬು ಬೀಳುವುದನ್ನು ನೋಡಿದ; ಹಾಗೆಯೇ ಯಾವುದೇ ವಸ್ತು ಮೇಲಿಂದ ಕೆಳಗೆಯೇ ಬೀಳುತ್ತದೆ ಎನ್ನುವುದನ್ನು ಗಮನಿಸಿದ. ಈ ಕ್ರಮವನ್ನು ತಪ್ಪದ ಯಾವೊಂದು ಸಂಗತಿಯೂ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಮೇಲೆ ಚಿಮ್ಮಿದ ಯಾವುದೇ ವಸ್ತು ಕೆಳಬೀಳಲೇಬೇಕು ಎನ್ನುವುದನ್ನು ಪ್ರಯೋಗಗಳ ಮೂಲಕ ದೃಢಪಡಿಸಿಕೊಂಡ ಮೇಲೆ ಗುರುತ್ವಾಕರ್ಷಣ ನಿಯಮ ಕಂಡುಹಿಡಿದ. ಗಮನಿಸಿ: ಮೇಲಿಂದ ವಸ್ತು ಕೆಳಬೀಳುತ್ತದೆ ಎಂದರೆ ಅದು ವಿಜ್ಞಾನವಾಗಲಿಲ್ಲ. ಅದು ಕೇವಲ ಸಿದ್ಧಾಂತ ಆಗುತ್ತದೆ ಅಷ್ಟೆ. ಆದರೆ, ಕಡಿಮೆ ದ್ರವ್ಯರಾಶಿ ಇರುವ ವಸ್ತುವನ್ನು ಹೆಚ್ಚು ದ್ರವ್ಯರಾಶಿ ಇರುವ ವಸ್ತು ಆಕರ್ಷಿಸುತ್ತದೆ. ದ್ರವ್ಯರಾಶಿಯೇ ಆಕರ್ಷಣೆ ಎಂಬ ಹೊಸಶಕ್ತಿ ಹುಟ್ಟಲು ಕಾರಣ. ಇದು ಎರಡು ವಸ್ತುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮವಾಗಿರುತ್ತದೆ. ಅಂದರೆ, ತುಂಬ ಹತ್ತಿರದಲ್ಲಿರುವ ವಸ್ತುಗಳ ಆಕರ್ಷಣೆ ಹೆಚ್ಚು; ದೂರ ಹೋದಷ್ಟು ಈ ಸೆಳೆತ ಕಡಿಮೆ. ಚಂದ್ರ ಭೂಮಿಗೆ ಸುತ್ತು ಬರುವುದು, ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವುದು – ಇವೆಲ್ಲ ಗುರುತ್ವದ ಆಟ ಎನ್ನುವುದನ್ನು ಯಾವ ಸಂಶಯಕ್ಕೆ ಎಡೆ ಇಲ್ಲದಂತೆ ತರ್ಕಬದ್ಧವಾಗಿ ಮಂಡಿಸುವುದು ವಿಜ್ಞಾನ. ನ್ಯೂಟನ್ ಕೊಟ್ಟ ಸೂತ್ರವನ್ನು ಬಳಸಿ ಯಾರು ಬೇಕಾದರೂ, ವಿಶ್ವದ ಯಾವ ಮೂಲೆಯಲ್ಲಿ ಬೇಕಾದರೂ ಪ್ರಯೋಗ ಮಾಡಿ ನೋಡಬಹುದು. ಅವರಿಗೆ ಸಿಗುವ ಉತ್ತರ ಒಂದೇ ಆಗಿರುತ್ತದೆ.
ವಿಜ್ಞಾನದ ಬಗ್ಗೆ ಹೇಳುತ್ತಲೇ ಅಲ್ಲಿ ಸಿದ್ಧಾಂತದ ಮಾತು ಬಂತು. ವಿಜ್ಞಾನದ ದಾರಿಯಲ್ಲಿ ಹೋಗುವಾಗ ನಮಗೆ ಪ್ರಯೋಗ ಮತ್ತು ಸಿದ್ಧಾಂತ ಎಂದು ದಾರಿ ಕವಲೊಡೆಯುತ್ತದೆ. “ನೋಡಿ, ನಾನು ಒಂದಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ಅವುಗಳ ಆಧಾರದಲ್ಲಿ ಒಂದಷ್ಟು ವಿಚಾರಗಳನ್ನು ಯೋಚಿಸಿದ್ದೇನೆ. ಅವು ಸತ್ಯ ಇದ್ದರೂ ಇರಬಹುದು” ಎಂದು ಹೇಳುವುದು ಸಿದ್ಧಾಂತ. ಉದಾಹರಣೆಗೆ ವಿಶ್ವಸೃಷ್ಟಿ ಒಂದು ಮಹಾಸ್ಫೋಟದಿಂದ ಆಗಿರಬಹುದು ಎನ್ನುವ “ಬಿಗ್‍ಬ್ಯಾಂಗ್” ಒಂದು ಸಿದ್ಧಾಂತ. ವಿಶ್ವದಲ್ಲಿ ಪ್ರತಿಯೊಂದು ವಸ್ತುವಿನ ಚಲನೆಯೂ ಇನ್ನೊಂದಕ್ಕೆ ಸಾಪೇಕ್ಷ. ಕಾಲವನ್ನು ನಾಲ್ಕನೇ ಆಯಾಮವಾಗಿ ತೆಗೆದುಕೊಳ್ಳಬಹುದು; ಮಾತ್ರವಲ್ಲ ಅದನ್ನು ಬೇಕಾದಂತೆ ಬಗ್ಗಿಸಬಹುದು – ತಿರುಚಬಹುದು ಎನ್ನುವ ಐನ್‍ಸ್ಟೈನರ “ರಿಲೇಟಿವಿಟಿ” ವಾದವೂ ಒಂದು ಸಿದ್ಧಾಂತ. ಇವುಗಳನ್ನು ಬೆಂಬಲಿಸುವ ಸಾವಿರ ಪ್ರಯೋಗಗಳು ಇರಬಹುದು; ಆದರೆ, ಇನ್ನೂ ಮಾಡಿನೋಡಬೇಕಾದ ಅಸಂಖ್ಯ ಪ್ರಯೋಗಗಳು ಬಾಕಿ ಇರಬಹುದು. ಅಂತಹ ಎಲ್ಲಾ ಪ್ರಯೋಗಗಳಲ್ಲಿ ಗೆದ್ದುಬಂದ ನಂತರವಷ್ಟೇ ಅವನ್ನು ಪೂರ್ಣವಾಗಿ “ವಿಜ್ಞಾನ” ಎಂದು ಒಪ್ಪಬಹುದು. ಮಾರ್ಗಮಧ್ಯೆ ಯಾವುದಾದರೂ ಪ್ರಯೋಗ ಈ ಸಿದ್ಧಾಂತವನ್ನು ತಪ್ಪು ಎಂದು ಸಾಬೀತುಪಡಿಸಿದರೆ, ಅದಕ್ಕೆ ವಿಜ್ಞಾನ ಎಂಬ ನೆಲೆಯಲ್ಲಿ ಸಿಕ್ಕಿದ ಮಾನ್ಯತೆಯೆಲ್ಲ ಬಿದ್ದುಹೋಗುತ್ತದೆ. ಒಂದಾನೊಂದು ಕಾಲದಲ್ಲಿ “ವಿಜ್ಞಾನ” ಎಂದು ಗುರುತಿಸಲ್ಪಟ್ಟಿದ್ದ “ಭೂಕೇಂದ್ರವಾದ” ಕಿತ್ತೊಗೆಯಲ್ಪಟ್ಟದ್ದು ಹೀಗೆ.
ಇನ್ನು, ಪ್ರಯೋಗಕ್ಕೆ ಅತೀತವಾದ ಸತ್ಯಗಳನ್ನು ಕಾಣಲು ನಾವು ತರ್ಕದ ಮೊರೆ ಹೋಗಬೇಕು. ತರ್ಕ ಎಂದರೇನು? ನಾವು ಯಾವುದನ್ನು ತರ್ಕ ಎಂದು ಒಪ್ಪಬಹುದು? ತರ್ಕಶಾಸ್ತ್ರ ಎನ್ನುವುದು ಗಣಿತದ ಒಂದು ಉಪಶಾಖೆ. ಇದನ್ನು ಗ್ರೀಕರು “ಲಾಜಿಕ್” ಎಂದೂ ಭಾರತೀಯರು “ನ್ಯಾಯ” ಎಂದೂ ಅಭಿವೃದ್ಧಿಪಡಿಸಿದರು. ಗ್ರೀಕರಲ್ಲಿ ಅರಿಸ್ಟಾಟಲ್, ಪ್ಲೇಟೋ, ಪೈಥಾಗೊರಸ್, ಟಾಲೆಮಿ ಮುಂತಾದವರು; ಭಾರತದಲ್ಲಿ ಆಪಸ್ತಂಭ, ಬೋಧಾಯನ, ಗೌತಮ, ನಾಗಾರ್ಜುನ ಮುಂತಾದವರು ಇದನ್ನು ಬೆಳೆಸಿದರು. ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ. ಮೊನ್ನೆ, ನಿನ್ನೆ, ಇಂದು ಹುಟ್ಟಿದ್ದಾನೆ; ಹಾಗಾಗಿ ನಾಳೆಯೂ ಸೂರ್ಯ ಹುಟ್ಟುವುದು ಶತಸ್ಸಿದ್ಧ ಎನ್ನುವುದು ಒಬ್ಬರ ಆಲೋಚನೆಯಾದರೆ, ಹಾಗೆ ಆಗಲೇಬೇಕೆಂದಿಲ್ಲವಲ್ಲ! ನಿನ್ನೆಮೊನ್ನೆ ನಡೆದ ಘಟನೆ ನಿನ್ನೆಮೊನ್ನೆ ನಡೆದಿದೆ ಎನ್ನುವ ಕಾರಣಕ್ಕಾಗಿಯೇ ನಾಳೆಯೂ ನಡೆಯಬೇಕು ಎಂದು ಹೇಗೆ ಹೇಳುವುದು? ಎನ್ನುವ ಚಿಂತನೆ ಇನ್ನೊಬ್ಬರದಿರಬಹುದು. ಈ ಇಬ್ಬರ ವಾದವನ್ನು ಪರಿಹರಿಸುವುದು ಹೇಗೆ? ಯಾರ ವಾದ ಸತ್ಯಕ್ಕೆ ಹತ್ತಿರ? ಇಷ್ಟಕ್ಕೂ “ಸತ್ಯ” ಎಂದರೇನು? ನಮ್ಮ “ಕಣ್ಣಿಗೆ” ಕಾಣುವುದು ಮಾತ್ರ ಸತ್ಯವೋ? ಇಂದ್ರಿಯಾನುಭವಕ್ಕೆ ಮೀರಿದ್ದನ್ನು ಸತ್ಯ ಎಂದು ಒಪ್ಪಿಕೊಳ್ಳುವಂತಿಲ್ಲವೆ? – ಇಂತಹ ಪ್ರಶ್ನೆಗಳನ್ನು ಕೇಳುತ್ತ ಚಿಂತನೆಯ ಆಳಕ್ಕೆ ಇಳಿಯುತ್ತ ಹೋದವರು ಹಿಡಿದ ಮೀನು “ತರ್ಕ”. ತರ್ಕವು ಎಷ್ಟು ಪರಿಶುದ್ಧಜ್ಞಾನವೆಂದರೆ ಅದನ್ನು ಯಾವುದೇ ವಿಜ್ಞಾನಕ್ಕೆ ಅಥವಾ ವಿಜ್ಞಾನವಲ್ಲದ ದಿನನಿತ್ಯದ ಸಂಗತಿಗಳಿಗೆ ಬಳಸಬಹುದು. ಗಣಿತಕ್ಕೆ ತಾಯಿಬೇರು ತರ್ಕ. “ಯಾವುದೇ ಕಾರ್ಯ ನಡೆಯಬೇಕಾದರೂ ಅದಕ್ಕೊಂದು ಕಾರಣ ಇರಬೇಕು. ಕಾರಣ ಮುಂದೆ ನಡೆಯುವ ಕಾರ್ಯಕ್ಕೆ ತಕ್ಕ ವೇದಿಕೆ ಒದಗಿಸಿಕೊಡಬೇಕು” – ಇದು ವಿಜ್ಞಾನದಲ್ಲಿ ಬಳಸುವ ತರ್ಕದ ಸಾರಾಂಶ. ಇದನ್ನೇ ಸಂಕ್ಷಿಪ್ತವಾಗಿ “ಕಾರ್ಯಕಾರಣ ಸಂಬಂಧ” ಎನ್ನುವುದು. ಚೆಂಡು ಬೌಂಡರಿಯಾಚೆ ಚಿಮ್ಮಲು ಕಾರಣ, ಅದು ಅಲ್ಲಿಗೆ ಹೋಗಲು ಬೇಕಾದಷ್ಟು ಚಲನಶಕ್ತಿಯನ್ನು ಗಳಿಸಿದ್ದು. ಅದು ಚಲನೆ ಗಳಿಸಲು ಕಾರಣ, ಬ್ಯಾಟು ಬೀಸಿ ಅದಕ್ಕೆ ಶಕ್ತಿಯನ್ನು ಊಡಿದ್ದು. ಬ್ಯಾಟನ್ನು ಮುಟ್ಟಿದೊಡನೆ ಚೆಂಡು ಚಿಮ್ಮಲು ಕಾರಣ, ಅದನ್ನು ಅಷ್ಟೇ ವೇಗದಿಂದ ಬೀಸಿ ಬೌಲಿಂಗ್ ಮಾಡಿದ್ದು.. ಹೀಗೆ ಯೋಚಿಸುತ್ತ ಹೋದರೆ ಪ್ರತಿ ಘಟನೆಗೂ ಹಿಂದೆ ಒಂದು ಕಾರಣದ ಬಲ ಇದೆ ಎನ್ನುವುದು ಗೊತ್ತಾಗುತ್ತದೆ. ಈ ತರ್ಕ ಅನೇಕ ಅನುಮಾನಗಳನ್ನು ಪರಿಹರಿಸಿ ನಮ್ಮ ಬುದ್ಧಿಯನ್ನು ಚುರುಕುಗೊಳಿಸುತ್ತದೆ. “ಚೆಂಡು ಚಿಮ್ಮಿದ್ದಕ್ಕೆ ದೈವವೇ ಕಾರಣ” ಎನ್ನಹೋದರೆ, ನಾವು ಈ ಎಲ್ಲ ಕಾರ್ಯಕಾರಣ ಸಂಬಂಧವನ್ನು ನಿರಾಕರಿಸಿದಂತೆ.
ಶಾಸ್ತ್ರಕ್ಕೂ ವಿಜ್ಞಾನಕ್ಕೂ ಭೇದ ಬರುವುದು ಇಲ್ಲೆ. ಒಬ್ಬರು ಬರೆದಿಟ್ಟದ್ದನ್ನು ಅನುಕರಿಸುವುದು ಶಾಸ್ತ್ರ. ಉದಾಹರಣೆಗೆ ಪತಂಜಲಿ ಬರೆದ ಯೋಗಶಾಸ್ತ್ರ. ಆತ ಬರೆದ ಆಸನಗಳನ್ನು ಚಾಚೂ ತಪ್ಪದೆ ಅದೇ ಕ್ರಮದಲ್ಲಿ, ವಿಧಾನದಲ್ಲಿ ಅನುಸರಿಸಬೇಕು. ಪಾಣಿನಿಯ ವ್ಯಾಕರಣ, ಪಿಂಗಳನ ಛಂದಶ್ಶಾಸ್ತ್ರಗಳೆಲ್ಲ ಈ ಬಗೆಯವು. ಯೂಕ್ಲಿಡನ ಜ್ಯಾಮಿತಿಯೂ ಆ ದೃಷ್ಟಿಯಲ್ಲಿ ಒಂದು ಶಾಸ್ತ್ರವೇ. ಅಲ್ಲಿ ಹಸ್ತಕ್ಷೇಪಕ್ಕೆ ಎಡೆಯಿಲ್ಲ. ಅಂದಮಾತ್ರಕ್ಕೆ ಶಾಸ್ತ್ರ ಗೊಡ್ಡು ಎನ್ನುವ ತೀರ್ಮಾನಕ್ಕೆ ಬರಬಾರದು! ಬರೆದಿಟ್ಟು ಎರಡೂವರೆ ಸಾವಿರವರ್ಷಗಳೇ ಸಂದರೂ ಪಾಣಿನಿಯ ವ್ಯಾಕರಣದಲ್ಲಿ ಒಂದನ್ನಾದರೂ ಅತ್ತಿತ್ತ ಅಲುಗಿಸಬೇಕಾದ ಅಗತ್ಯ ಇದುವರೆಗೆ ಬಂದಿಲ್ಲ; ಯೋಗಶಾಸ್ತ್ರದ ವಿಚಾರದಲ್ಲೂ ಇದು ನಿಜವಿರಬಹುದು ಎಂದುಕೊಂಡಿದ್ದೇನೆ. ಯೂಕ್ಲಿಡನ “ಎಲಿಮೆಂಟ್ಸ್”ಅನ್ನು ಅದೇ ಕ್ರಮದಲ್ಲಿ ಇಂದಿಗೂ ಓದಿ ಜ್ಯಾಮಿತಿಯಲ್ಲಿ ಪಾಂಡಿತ್ಯ ಪಡೆಯಬಹುದು. ಆದರೆ, ಈ ಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ಇನ್ನಷ್ಟು ಬೆಳೆಯಲು ವಿಜ್ಞಾನ ಅವಕಾಶ ಮಾಡಿಕೊಡುತ್ತದೆ. ವಿಜ್ಞಾನದಲ್ಲಿ “ಅಂತಿಮ ನಿರ್ಣಯ” ಎಂಬುದಕ್ಕೆ ಮಾನ್ಯತೆ ಇಲ್ಲ. ವೈದ್ಯಕೀಯದಲ್ಲಿ ನಡೆಯುತ್ತಿರುವ ನೂರಾರು ಸಂಶೋಧನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಯಾವುದೋ ಕಾಯಿಲೆಗೆ ಕಾರಣವಾದ ಅಂಶ “ಇದೇ” ಎಂದು ಹೇಳಿದ ಐದುವರ್ಷಗಳಲ್ಲಿ ನಮ್ಮ ತಂತ್ರಜ್ಞಾನ, ಪ್ರಯೋಗವಿಧಾನಗಳು ಬೆಳೆದು, ಮಾಡಿದ ಹೊಸ ಪ್ರಯೋಗ ಇನ್ನಾವುದೋ ಕಾರಣವನ್ನು ತೋರಿಸಬಹುದು. ಇಲ್ಲಿ “ಕಾರಣ” ಎಂದು ಗುರುತಿಸುವ ಅಂಶಗಳು ಎಷ್ಟೋ ಸಲ ನಮ್ಮ, ಅಂದರೆ ಮನುಷ್ಯನ ನಿಯಂತ್ರಣಕ್ಕೆ ಒಳಪಡದ ಸಂಗತಿ ಎನ್ನುವುದು ಗಮನೀಯ. ಜ್ವರ ಬಂದಿದೆ ಎಂದು ಮದ್ದು ಕೊಡುವ ವೈದ್ಯ ಸರಿಯಾದ ಪರೀಕ್ಷೆ ಮಾಡಿದರೆ ಮಾತ್ರ ಅದು ಚಳಿಜ್ವರವೋ ಹಂದಿಜ್ವರವೋ ಎಂದು ಗುರುತಿಸಬಲ್ಲ. ಕ್ಯಾನ್ಸರ್ ಬರಲು ನಮ್ಮೊಳಗಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದು ಕಾರಣ ಎನ್ನುವುದು ನಮಗೆ ಗೊತ್ತಿದೆ. ಅನೇಕ ಪರೀಕ್ಷೆ-ಪ್ರಯೋಗಗಳಿಂದ ಸಾಬೀತಾದ ಸತ್ಯ ಇದು. ಆದರೆ, ಆ ಜೀವಕೋಶಗಳಿಗೆ ಹಾಗೆ ಬೆಳೆಯುವ ಹುಚ್ಚು ಹತ್ತಿಸುವ ಅಂಶ ಯಾವುದು? ವೈದ್ಯಕೀಯ ವಿಜ್ಞಾನದ ಎಲ್ಲ ಸಲಕರಣೆಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಪ್ರಯೋಗಕ್ಕಿಳಿದರೂ ಆ “ಕಾರಣ” ಪತ್ತೆಯಾಗಿಲ್ಲ. ಅಲ್ಲಿಯವರೆಗೆ ನಾವು ಕೊಡುತ್ತ ಹೋಗುವ ಕಾರಣಗಳು ಪೂರ್ತಿಸತ್ಯವೋ ಅರ್ಧಸತ್ಯವೋ ಇರಬಹುದು. ಆದರೆ ಒಂದಂಶವನ್ನು ಇಲ್ಲಿ ಗಮನಿಸಬೇಕು: ವೈದ್ಯಕೀಯಕ್ಕೆ ಕಾರ್ಯಕಾರಣತರ್ಕವನ್ನು ಬೆನ್ನುಹತ್ತಿ ಹೋಗುವ ಛಲ ಇದೆ; ಆ ತರ್ಕದ ನಿರಾಕರಣೆ ಇಲ್ಲ.
ಶಾಸ್ತ್ರ ಸರಿಯಾದ ಸಂಶೋಧನೆಯ ಮೂಲಕ ಮೌಲ್ಯಯುತ ನಿರ್ಣಯಗಳನ್ನು ಕೊಟ್ಟರೆ ಅದನ್ನು ವಿಜ್ಞಾನ ಎಂದೂ ಮಾನ್ಯ ಮಾಡಬಹುದು. ಇನ್ನು ಕೆಲವೊಂದು ಜ್ಞಾನಶಾಖೆಗಳು ಶಾಸ್ತ್ರವಾಗಿ ಹುಟ್ಟಿ ಮುಂದೆ ವಿಜ್ಞಾನವಾಗಿ ಬೆಳೆಯುತ್ತವೆ. ಆಯುರ್ವೇದ ಒಂದು ಉದಾಹರಣೆ. ಅದಕ್ಕೆ ಶಾಸ್ತ್ರಗ್ರಂಥಗಳ ಬೆಂಬಲ ಇದೆ; ಆದರೆ ಅಷ್ಟಕ್ಕೇ ತನ್ನನ್ನು ಸೀಮಿತಗೊಳಿಸದೆ ಹೊಸ ಪದ್ಧತಿ, ಪ್ರಯೋಗಗಳ ಮೂಲಕ ಆಯುರ್ವೇದ ಬೆಳೆಯುತ್ತಿದೆ. ಜ್ಯೋತಿಶ್ಶಾಸ್ತ್ರ (ಂsಣಡಿoಟಿomಥಿ) ಇನ್ನೊಂದು ಉದಾಹರಣೆ. ಅದು ಮೊದಲು ಶಾಸ್ತ್ರವಾಗಿ ಹುಟ್ಟಿದಾಗ, ಅದರಲ್ಲಿದ್ದ ಎಷ್ಟೋ ಕಲ್ಪನೆಗಳು ತಪ್ಪಾಗಿದ್ದವು. ಭೂಮಿಯೇ ವಿಶ್ವಕ್ಕೆ ಕೇಂದ್ರ ಎಂಬ ವಾದದ ಮೇಲೆಯೇ ಇಡೀ ಶಾಸ್ತ್ರ ನಿಂತಿತ್ತು ಎಂದ ಮೇಲೆ ಕೇಳಬೇಕೆ! ಆದರೆ, ಅದರಲ್ಲಿ ಆಳವಾದ ಕೆಲಸ ಮಾಡತೊಡಗಿದವರಿಗೆ ಈ ತೊಡಕುಗಳು ಗಮನಕ್ಕೆ ಬಂದು, ಹಳೆಯ ತತ್ವಗಳನ್ನು ಬದಲಿಸಿ ಹೊಸದನ್ನು ಅಳವಡಿಸಿ, ಒಟ್ಟಾರೆ ಇಡೀ ಶಾಸ್ತ್ರವನ್ನೇ ಥಿಸಿಯಸನ ಹಡಗಿನಂತೆ ಮರುನಿರ್ಮಾಣ ಮಾಡಿದರು. ಅಲ್ಲದೆ, ತಮ್ಮ ಪ್ರತಿ ವೀಕ್ಷಣೆಗೂ ಕಾರ್ಯಕಾರಣದ ಬೆಂಬಲ ಇದೆಯೇ ಎನ್ನುವುದನ್ನು ಅವರು ಕೇಳುತ್ತ ಬಂದದ್ದರಿಂದ, ಆ ಕ್ಷೇತ್ರ ಹೆಚ್ಚು ವೈಜ್ಞಾನಿಕವಾಗಿ ಪರಿಪುಷ್ಟವಾಯಿತು. ಸೂರ್ಯಮಂಡಲಕ್ಕಷ್ಟೇ ಸೀಮಿತವಾಗಿದ್ದ ದೃಷ್ಟಿ ಗ್ಯಾಲಕ್ಸಿಗೆ, ಅದರಾಚೆ ವಿಶ್ವಕ್ಕೆ ಚಾಚಿತು. ಈಗಿನ ಜ್ಯೋತಿರ್ವಿಜ್ಞಾನ “ಅನೇಕ ವಿಶ್ವಗಳ ಸಿದ್ಧಾಂತ”ದವರೆಗೆ ಹೋಗಿ ನಿಂತಿದೆ. ಆದರೆ, ವಿಜ್ಞಾನವನ್ನು ಆಶ್ರಯಿಸಿದ್ದರಿಂದ, ತಾನು ಹೇಳಿದ್ದನ್ನು “ಸಿದ್ಧಾಂತ ಅಷ್ಟೇ. ಪರಮಸತ್ಯವಲ್ಲ” ಎಂದು ಹೇಳುವ ವಿವೇಚನೆ ಅದಕ್ಕೆ ಬಂದಿದೆ.
ಆಗಲೇ ಹೇಳಿದ ಹಾಗೆ, ಈ ನಿಟ್ಟಿನಲ್ಲಿ ನಾವು ಧರ್ಮವನ್ನು ಕೈಗೆತ್ತಿಕೊಂಡರೆ ಅದನ್ನು “ಅವಿಜ್ಞಾನ”ದ ತಕ್ಕಡಿಗೆ ಹಾಕಬೇಕಾಗುತ್ತದೆ. ಯಾಕೆಂದರೆ ಧರ್ಮ ಎನ್ನುವುದು ಸತ್ಯದ ಹುಡುಕಾಟಕ್ಕಿಂತಲೂ ಹೆಚ್ಚಾಗಿ ಮನುಷ್ಯ ಈ ಭೂಮಿಯ ಮೇಲೆ ಹೇಗೆ ಬದುಕಬೇಕು ಎನ್ನುವುದಕ್ಕೆ ಬೇಕಾದ ಚೌಕಟ್ಟನ್ನು ಹಾಕುವ ವ್ಯವಸ್ಥೆ. ಹಾಗೆ ಹಾಕಿದ ಕಟ್ಟುಪಾಡುಗಳನ್ನು ಆಯಾ ಧರ್ಮಗಳು ತಮ್ಮ ಶಾಸ್ತ್ರಗಳ ಮೂಲಕ ಜನರಿಗೆ ಉಪದೇಶದ ರೂಪದಲ್ಲಿ ಹೇಳಿ ಅನುಸರಿಸುವಂತೆ ನೋಡಿಕೊಂಡವು. ಈ ಕಟ್ಟುಪಾಡುಗಳಲ್ಲಿ ಎಷ್ಟನ್ನು ಪ್ರಾಚೀನರು ಕಾರ್ಯಕಾರಣ ಸಂಬಂಧದ ಬೆಳಕಲ್ಲಿ ಪರೀಕ್ಷೆಗೊಳಪಡಿಸಿ ಬರೆದಿದ್ದಾರೆ ಎನ್ನುವುದು ಪ್ರಶ್ನಾರ್ಹ ವಿಚಾರ. ಆದರೆ, ಯಾವುದೋ ಕಾಲದಲ್ಲಿ ಜನರಿಗೆ ಈ ಸಂಪ್ರದಾಯಗಳಿಗೂ ವಿಜ್ಞಾನದ ಗಾಳಿ ಹಾಯಿಸಬೇಕು ಎಂಬ ಆಸೆಯಾಗಿರಬೇಕು. ತಮ್ಮ ಧರ್ಮಗ್ರಂಥಗಳು ಹೇಳುವ ಒಂದೊಂದು ಸಾಲನ್ನೂ ವೈಜ್ಞಾನಿಕ ಎಂದು ಬಿಂಬಿಸಲು ಹೆಣಗತೊಡಗಿದರು. ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಒಳ್ಳೆಯದು; ಅದರಿಂದ ಸೊಳ್ಳೆಪಳ್ಳೆಯನ್ನು ದೂರ ಇಡಬಹುದು ಅಂದರು. ಚಿಕ್ಕಮಕ್ಕಳಿಗೆ ಮುಂಜಿ ಮಾಡಿಸುವುದು ಒಳ್ಳೆಯದು; ಅದರಿಂದ ಯೌವನದಲ್ಲಿ ಹಲವು ರೋಗಗಳಿಂದ ದೂರ ಇರಬಹುದು ಎಂದರು. ಏಕಪ್ರಕಾರವಾಗಿ ಮಂತ್ರವನ್ನು ತಾರಕಸ್ಥಾಯಿಯಲ್ಲಿ ಹೇಳುತ್ತ ಹೋದಾಗ ಹುಟ್ಟುವ ತರಂಗಗಳಿಂದ ಮಾನಸಿಕಶಕ್ತಿ ಬೆಳೆಯುತ್ತದೆ ಎಂದರು. ವಿಗ್ರಹಾರಾಧನೆ ಮಾಡುವುದರಿಂದ ಏಕಾಗ್ರತೆ ಹುಟ್ಟುತ್ತದೆಂದರು. ಮುಟ್ಟಾದ ಹುಡುಗಿಯನ್ನು ದೂರ ಇಡುವುದರಿಂದ ಸೋಂಕುರೋಗಗಳನ್ನು ತಡೆದು ಆರೋಗ್ಯ ಕಾಪಾಡಬಹುದೆಂದರು. ವರ್ಷಕ್ಕೊಮ್ಮೆ ತಿಂಗಳುಪೂರ್ತಿ ಉಪವಾಸ ಇರುವುದು ದೇಹಾರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು. ಹೀಗೆ ತಮ್ಮ ಗ್ರಂಥಗಳಲ್ಲಿ ಬಂದದ್ದನ್ನು, ಬಾರದ್ದನ್ನೂ ಸೇರಿಸಿ ವಿಜ್ಞಾನದ ಕೊರಳುಪಟ್ಟಿಗೆ ಬಿಗಿದರು. ಇದನ್ನು ಯಾಕೆ, ಯಾರು, ಯಾವಾಗ ಮಾಡಿದರೆನ್ನುವ ಸಂಶೋಧನೆ ಶುರುಮಾಡಿದವರು ಯಾರೂ ಕೊನೆ ಮುಟ್ಟಿಲ್ಲವಾದ್ದರಿಂದ, ನಾವು ಅದಕ್ಕೆ ಇಲ್ಲಿಂದಲೇ ಕೈಮುಗಿದು ಮುಂದೆ ಹೋಗುವುದು ಒಳ್ಳೆಯದು. ಮೇಲೆ ಹೇಳಿದ ಎಲ್ಲವನ್ನೂ “ಸಂಪ್ರದಾಯ-ನಂಬಿಕೆ-ಶ್ರದ್ಧೆ” ಎಂಬ ನೆಲೆಗಟ್ಟಿನಲ್ಲಿ ನೋಡುವುದಕ್ಕೆ ಏನು ತೊಂದರೆ ಎನ್ನುವುದಕ್ಕೆ ಉತ್ತರವಿಲ್ಲ. ಬಹುಶಃ ಧಾರ್ಮಿಕರು, ತಮ್ಮ ಸಂಪ್ರದಾಯಗಳಿಗೆ ವಿಜ್ಞಾನದ ಮೊಹರು ಇದ್ದರೆ ಒಳ್ಳೆಯದು ಎಂದು ಭಾವಿಸಿದ್ದಾರೋ ಏನೋ. ವಿಜ್ಞಾನ ಎನ್ನುವುದು ಎಲ್ಲಕ್ಕಿಂತ ಶ್ರೇಷ್ಠ; ಅದರ ನಿಕಷಕ್ಕೆ ನಮ್ಮ ತತ್ವಗಳನ್ನೂ ಒಡ್ಡಿಕೊಂಡಿದ್ದೇವೆ ಎನ್ನುವುದು, ಕಂಪೆನಿಗಳು ಐಎಸ್‍ಐ ಮಾರ್ಕನ್ನು ಒತ್ತಿಸಿಕೊಂಡಂತೆ – ಎಂದು ಜನ ತಿಳಿದಿದ್ದಾರೆ ಎನ್ನುವುದಂತೂ ಸ್ಪಷ್ಟ. ಟಿವಿಯಲ್ಲಿ ಬರುವ ಕವಡೆಶಾಸ್ತ್ರಿಗಳು, ಜ್ಯೋತಿಷಿಗಳು, ನ್ಯುಮರಾಲಜಿ ಪಂಡಿತರು – ಎಲ್ಲರೂ ತಮ್ಮ ಶಾಸ್ತ್ರ ವೈಜ್ಞಾನಿಕ ಎಂದು ಬಿಂಬಿಸಲು ಹೆಣಗುವುದನ್ನು ನೋಡಿದಾಗ, ಜನರಿಗೆ ವಿಜ್ಞಾನದ ಬಗ್ಗೆ ಗುಟ್ಟಿನ ಪ್ರೇಮವಿರುವುದು ಕಾಣುತ್ತದೆ.
ಇರಲಿ, ನಮ್ಮ ಚರ್ಚೆ ಧರ್ಮ ಮತ್ತು ವಿಜ್ಞಾನದ ಅಂತರ್‍ಸಂಬಂಧಗಳ ಕಡೆಗೆ ಹೊರಳಿತ್ತು. ಧರ್ಮದಲ್ಲಿ ಬರುವ ಎಷ್ಟೋ ಆಚರಣೆಗಳನ್ನು ಕೇವಲ “ನಂಬಿಕೆ-ಶ್ರದ್ಧೆ” ಎಂಬ ನೆಲೆಗಟ್ಟಿನಲ್ಲಿ ನೋಡುವುದಕ್ಕೆ ಯಾವ ತೊಂದರೆಯೂ ಇಲ್ಲ. ಮತ್ತು ಹಾಗೆ ನೋಡುವುದೇ ಸಾಧು ಕೂಡ. ಧರ್ಮಾಚರಣೆಯನ್ನು ವಿಜ್ಞಾನದ ಕೊರಳಿಗೆ ತಗುಲು ಹಾಕಹೋದಾಗ ನಮಗೆ ಮುಖ್ಯವಾಗಿ ಎದುರಾಗುವುದು “ಕಾರ್ಯಕಾರಣ ಸಂಬಂಧ”ದ ಪ್ರಶ್ನೆ. ಉದಾಹರಣೆಗೆ ಸ್ನಾನ ಮಾಡಿ ಸಂಧ್ಯಾವಂದನೆಗೆ ಕೂತ ವಟು ಗೋಪೀಚಂದನಧಾರಣೆ ಮಾಡುವುದು ಸಂಪ್ರದಾಯ. ಇದನ್ನು ಕೇವಲ ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಿದರೆ ಏನೂ ತೊಂದರೆಯಿಲ್ಲ. ಆದರೆ, ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕಿ ತೆಗೆಯುವುದು ಅನವಶ್ಯ ಮಾತ್ರವಲ್ಲ ಅನಾರೋಗ್ಯಕರ ಚರ್ಚೆಗೆ ನಾಂದಿ ಹಾಡಿದಂತೆ. “ಅವಿಜ್ಞಾನ” ಎಂದ ಮಾತ್ರಕ್ಕೆ ಅದು ಕೆಟ್ಟದು ಎಂದು ನಾವೇ ಸ್ವಯಮಾರೋಪ ಮಾಡಿಕೊಂಡಿರುವುದರಿಂದ ಹೀಗಾಗಿದೆ ಎನ್ನಬಹುದೇನೋ. ಮಂಗಳ ಗ್ರಹಕ್ಕೆ ರಾಕೆಟ್ ಕಳಿಸುವ ವಿಜ್ಞಾನಿಗಳು ತಿರುಪತಿ ದೇವರಿಗೆ ಚಿನ್ನದ ರಾಕೆಟ್ ಸಮರ್ಪಿಸಿದ ಸುದ್ದಿಯನ್ನೂ ನಾವು ಇದೇ ನೆಲೆಯಲ್ಲಿ ನೋಡಬೇಕಾಗುತ್ತದೆ. ವಿಜ್ಞಾನಿ ತಿರುಪತಿ ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡಿಸುವುದು, ಮುಡಿ ಕೊಡುವುದು ಅವನ ಮನಸ್ಸಿನ ಸಮಾಧಾನಕ್ಕೆ ತಾನೆ? ವಿಜ್ಞಾನಿಯಾದ ಮಾತ್ರಕ್ಕೆ ಅವನು ತನ್ನ ನಂಬಿಕೆಗಳನ್ನು-ಶ್ರದ್ಧೆ, ಆಚರಣೆಗಳನ್ನು ಬಲಿ ಕೊಡಬೇಕೆಂದೇನೂ ಇಲ್ಲವಲ್ಲ. ಇಷ್ಟಕ್ಕೂ ದೇವರು ಎಂಬ ಕಲ್ಪನೆಯೇ ವಿಜ್ಞಾನಕ್ಕೆ ಅತೀತವಾದದ್ದು. ಈ ಲೇಖನದ ಪ್ರಾರಂಭದಲ್ಲಿ ಹೇಳಿದಂತೆ, ದೇವರ ಅಸ್ತಿತ್ವವನ್ನು ನಂಬುವುದು ಅಥವಾ ನಿರಾಕರಿಸುವುದು ವಿಜ್ಞಾನದ ಕರ್ತವ್ಯವೇನಲ್ಲ. ರಾಕೆಟ್ ಹಾರಿಸುವ ಮೊದಲು ಕಾಶಿವಿಶ್ವನಾಥನಿಗೆ ಕಾಯಿ ಒಡೆಸಿಕೊಂಡು ಬರುವುದು ಕೇವಲ ನಂಬಿಕೆಯ ಪ್ರಶ್ನೆ. ಆದರೆ, ರಾಕೆಟ್‍ನಲ್ಲಿ ಪೆಟ್ರೋಲ್ ಬದಲು ಗಂಗಾತೀರ್ಥ ತುಂಬಿಸಿ, ದೇವರೇ ಹಾರಿಸಿಯಾನು ಎಂದು ಕಾಯುವುದು ವಿಜ್ಞಾನದ ಅಪಹಾಸ್ಯ ಮತ್ತು ಮೂರ್ಖತನ.
ವಿಜ್ಞಾನ-ಅವಿಜ್ಞಾನಗಳನ್ನು ನೋಡಿದ ನಾವು ಮೌಢ್ಯ ಎಂದರೇನೆಂದು ನೋಡೋಣ. ಮಳೆಗಾಗಿ ಕಪ್ಪೆಮದುವೆ ಮಾಡುವುದು – ಮೌಢ್ಯ. ಯಾಕೆಂದರೆ ಅದು ವಿಜ್ಞಾನದ ಯಾವೊಂದು ಪರೀಕ್ಷೆಯನ್ನೂ ಪಾಸು ಮಾಡುವುದಿಲ್ಲ. ಮಳೆ ಬರುವುದಕ್ಕೂ ಕಪ್ಪೆಗೆ ಮದುವೆ ಮಾಡುವುದಕ್ಕೂ ಕಾರ್ಯಕಾರಣ ಸಂಬಂಧ ಎಲ್ಲಿದೆ – ಎನ್ನುವ ಮೊದಲ ಪ್ರಶ್ನೆಯಲ್ಲೇ ಈ ಪದ್ಧತಿ ನಿರುತ್ತರವಾಗುತ್ತದೆ ಅಲ್ಲವೆ? ವಾಸ್ತು – ಇನ್ನೊಂದು ಮೌಢ್ಯ. ಒಂದು ಮನೆಯ ಕಿಟಕಿ, ಬಾಗಿಲು, ಗೋಡೆಗಳನ್ನು ವ್ಯವಸ್ಥಿತವಾಗಿ; ಗಾಳಿಬೆಳಕಿನ ದಿಕ್ಕುಗಳನ್ನು ನೋಡಿಕೊಂಡು ಕಟ್ಟಿದರೆ, ಮನೆಯಲ್ಲಿ ಹೆಚ್ಚು ಖುಷಿಯಿಂದ ಇರಬಹುದು ಎನ್ನುವುದು ಸರಿ; ಆದರೆ, ದಿಕ್ಕುಗಳು ಮನುಷ್ಯನ ಜೀವನದ ಪ್ರಮುಖಘಟ್ಟಗಳನ್ನು ನಿರ್ಧರಿಸುತ್ತವೆ, ಅವನ ಲಾಭ-ನಷ್ಟಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ಕಾರ್ಯಕಾರಣ ಸಂಬಂಧ ಇಲ್ಲ. ಅಲ್ಲದೆ ವಾಸ್ತು, ವಿಜ್ಞಾನವೇ ಆಗಿದ್ದ ಪಕ್ಷದಲ್ಲಿ, ಅದನ್ನು ಅನುಸರಿಸಿದ ನೂರಕ್ಕೆ ನೂರು ಮಂದಿಯೂ ಸುಖಸಂತೋಷದಿಂದ ಬಾಳ್ವೆ ಮಾಡಬೇಕಿತ್ತು. ತನ್ನ ಹೇಳಿಕೆಗಳಿಗೆ ವೈಜ್ಞಾನಿಕ ಆಧಾರ ಇದೆ ಎಂದು ಹೇಳಿಕೊಂಡಮೇಲೂ ಪ್ರಯೋಗದಲ್ಲಿ ತಪ್ಪು ಫಲಿತಾಂಶಗಳನ್ನು ಕೊಡುವ ಶಾಸ್ತ್ರವನ್ನು ಮೌಢ್ಯ ಎನ್ನಬೇಕಾಗುತ್ತದೆ. ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಗಮನಿಸಬಹುದು. ತಾನು ಹುಲುಸಾಗಿ ಬೆಳೆಯಲು ಬಂದಣಿಕೆಗೆ ಅರಳಿಯ ಆಸರೆ ಬೇಕಾಗುವಂತೆ, ಕೆಲವು ಮೌಢ್ಯಗಳು ಶುದ್ಧವಿಜ್ಞಾನವನ್ನು ಆಧರಿಸಿಕೊಂಡು ತಮ್ಮ ಬೇಳೆ ಬೇಯಿಸಲು ನೋಡುತ್ತವೆ. ಫಲಜ್ಯೋತಿಷ್ಯ, ವಾಸ್ತು, ಫೆಂಗ್‍ಶುಯಿ, ರೇಖಿ, ಕಾಸ್ಮಿಕ್ ಹೀಲಿಂಗ್, ಸಮ್ಮೋಹಿನಿ ಚಿಕಿತ್ಸೆ, ಯೋಗದ ಹಲವಾರು ಹೊಸ ರೂಪಾಂತರಗಳು – ಇವು ಈ ಪಟ್ಟಿಯಲ್ಲಿ ಬರುತ್ತವೆ. ಭೂಮಿಯಿಂದ ಲಕ್ಷಾಂತರ ಮೈಲಿ ದೂರದಲ್ಲಿರುವ ಗ್ರಹತಾರೆಗಳು ಮನುಷ್ಯನ ದೈನಂದಿನ ಆಗುಹೋಗುಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದು, ಮನೆಯಲ್ಲಿ ಅಲ್ಲಲ್ಲಿ ಕಟ್ಟುವ ಸಣ್ಣಪುಟ್ಟ ವಸ್ತುಗಳು ಜೀವನದ ಮಹತ್ತರ ಘಟನೆಗಳಿಗೆ ಕಾರಣವಾಗುತ್ತವೆ ಎನ್ನುವುದು, ಮೋಡಿ ಮಾಡಿ ವ್ಯಕ್ತಿಗೆ ಹಿಂದಿನ ಜನ್ಮದ ನೆನಪು ಹುಟ್ಟುವಂತೆ ಮಾಡಬಹುದು ಎನ್ನುವುದು, ಚಿಕಿತ್ಸೆ ಇಲ್ಲದೆ ಮಾರಣಾಂತಿಕ ರೋಗಗಳನ್ನು ಗುಣಪಡಿಸಬಹುದು ಎನ್ನುವುದು – ಇವೆಲ್ಲ ಕಾರ್ಯಕಾರಣ ಸಂಬಂಧಕ್ಕೆ ಪೂರ್ತಿ ವಿರುದ್ಧವಾದ ಚಿಂತನೆಗಳಾದ್ದರಿಂದ ಅವು “ವೈಜ್ಞಾನಿಕ” ಎಂಬ ಪಟ್ಟಿಯಲ್ಲೂ ಬರುವುದಿಲ್ಲ, ನಾವು ಈ ಲೇಖನದಲ್ಲಿ ಬಳಸಿದ “ಅವೈಜ್ಞಾನಿಕ” ಗುಂಪಲ್ಲೂ ಬರುವುದಿಲ್ಲ. ಅವನ್ನು ಮೌಢ್ಯ ಎಂದೇ ಕರೆಯಬೇಕಾಗುತ್ತದೆ.
ವಿಜ್ಞಾನಕ್ಕೂ ವೈಜ್ಞಾನಿಕ ಮನೋಭಾವಕ್ಕೂ ತುಂಬ ಹತ್ತಿರದ ನಂಟು. ನಾನು ಈ ಮೊದಲು ಹೇಳಿದ “ವಿಜ್ಞಾನಿ”ಗಳಲ್ಲಿ ಈ ಮನೋಭಾವ ಅಂತರ್ಗತವಾಗಿರುತ್ತದೆ. ಬೇರೆಯವರು ಕೂಡ ತುಸು ಪರಿಶ್ರಮಪಟ್ಟರೆ ಇದನ್ನು ಬೆಳೆಸಿಕೊಳ್ಳಬಹುದು. ವೈಜ್ಞಾನಿಕ ಮನೋಭಾವ ಎಂದರೆ “ಏಕೆ” ಎಂಬ ಪ್ರಶ್ನೆಗಳನ್ನು ಕೇಳುತ್ತ, ತರ್ಕಬದ್ಧ ಉತ್ತರಗಳನ್ನು ಅನ್ವೇಷಿಸುತ್ತ ಹೋಗುವ ನಿರಂತರ ಪ್ರಕ್ರಿಯೆ. ಇಲ್ಲಿ ಸತ್ಯಕ್ಕಲ್ಲದೆ ಇನ್ನಾವುದಕ್ಕೂ ತಲೆಬಾಗುವ, ಶರಣಾಗತನಾಗುವ ಅಗತ್ಯವಿಲ್ಲ. ಆದ್ದರಿಂದಲೇ ವಿಜ್ಞಾನದಲ್ಲಿ “ನಾನು ಹೇಳಿದ್ದಷ್ಟೇ ಸತ್ಯ” ಎಂದು ಹೇಳುವ ಪ್ರವಾದಿಗಳಿಲ್ಲ; ಹೀಗೇ ನಡೆಯಬೇಕು ಎಂದು ಕಟ್ಟುಪಾಡು ವಿಧಿಸುವ ಧರ್ಮಗ್ರಂಥಗಳಿಲ್ಲ. ತರ್ಕವಲ್ಲದೆ ಇನ್ನಾವ ಸಿದ್ಧಾಂತಕ್ಕೂ ಮನ್ನಣೆಯಿಲ್ಲ. ಹಾಗೆಂದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡವನು ಧಾಡಸಿತನದಿಂದ ವರ್ತಿಸಬೇಕೆಂದಿಲ್ಲ. ಎಷ್ಟೋ ಸಂಗತಿಗಳು ಗೊತ್ತಿಲ್ಲದ್ದನ್ನು ಒಪ್ಪಿಕೊಳ್ಳುವ ನಿಗರ್ವವೂ ಆತನಿಗೆ ಇರಬೇಕು. ಉದಾಹರಣೆಗೆ ವಿಶ್ವದ ಬಹುಪಾಲನ್ನು ಆವರಿಸಿರುವ “ಬ್ಲ್ಯಾಕ್ ಮ್ಯಾಟರ್” ಏನೆಂದೇ ಇದುವರೆಗೆ ವಿಜ್ಞಾನಿಗಳಿಗೆ ಗೊತ್ತಾಗಿಲ್ಲ. ಇಡೀ ಕಾಸ್ಮೋಸ್‍ನ ಕೇವಲ 5% ಮಾತ್ರ ಇದುವರೆಗೆ ಕಂಡಿದೆ. ಅದನ್ನು ಒಪ್ಪಿಕೊಳ್ಳಲು ಯಾವ ವಿಜ್ಞಾನಿಯೂ ನಾಚಿಕೆ ಪಡುವುದಿಲ್ಲ. ವೈಜ್ಞಾನಿಕ ಮನೋಭಾವ ಕೊಡುವ ಸಂಸ್ಕಾರ ಇದು.
ವೈಜ್ಞಾನಿಕದೃಷ್ಟಿಯನ್ನು ಯಾಕೆ ಬೆಳೆಸಿಕೊಳ್ಳಬೇಕು? ಅದಿಲ್ಲದೆ ಹೋದರೆ ಏನು ನಷ್ಟ? ಎಂದು ಕೇಳುವವರಿಗೆ ಫೈಯ್ನ್‍ಮನ್ ಎಂಬ ಅಮೆರಿಕನ್ ಭೌತವಿಜ್ಞಾನಿ ಒಂದು ಸುಂದರ ಉತ್ತರ ಕೊಟ್ಟಿದ್ದಾನೆ. ರಸಿಕನೊಬ್ಬ ಅವನೆದುರು ಒಂದು ಗುಲಾಬಿ ಹಿಡಿದು, “ನೋಡಯ್ಯ, ಎಷ್ಟು ಚೆನ್ನಾಗಿದೆ ಈ ಹೂವು! ಅದರ ಸೌಂದರ್ಯ ಆಸ್ವಾದಿಸಲಿಕ್ಕೂ ಕವಿಹೃದಯ ಬೇಕು. ಆದರೆ ನೀವು ವಿಜ್ಞಾನಿಗಳೋ ಅದರ ಪಕಳೆಗಳನ್ನು ಕಿತ್ತು ಸೂಕ್ಷ್ಮದರ್ಶಕದಡಿ ಇಟ್ಟು ಬಗೆಬಗೆಯ ಪ್ರಯೋಗ ಮಾಡಿ ಕೊಂದೇಬಿಡುತ್ತೀರಿ! ಎಂಥ ಅರಸಿಕರಪ್ಪ ನೀವು!” ಎಂದನಂತೆ. ಆಗ ಫೈಯ್ನ್‍ಮನ್ ಹೇಳುತ್ತಾನೆ: “ಗುಲಾಬಿ ಸುಂದರವಾಗಿದೆ ಎಂಬ ಅಂಶ ನನಗೂ ಗೊತ್ತಾಗುವಂಥಾದ್ದೇ. ಒಂದು ಗುಲಾಬಿಯ ಚೆಲುವನ್ನು ಮೆಚ್ಚುವಷ್ಟು ರಸಿಕತೆ ಪ್ರತಿಯೊಬ್ಬನಿಗೂ ಇದ್ದೇ ಇದೆ. ಆದರೆ, ವಿಜ್ಞಾನಿಯಾಗಿ ನಾನು ಕಾಣುವ ಸೌಂದರ್ಯ ಇನ್ನೂ ಹೆಚ್ಚಿನದು. ನಾನು ಆ ಪಕಳೆಗಳ ವಿನ್ಯಾಸ ನೋಡುತ್ತೇನೆ. ಪುಂಕೇಸರ ಹುಟ್ಟಿನಿಂತ ಬಗೆಯನ್ನು ಗಮನಿಸುತ್ತೇನೆ. ಪರಾಗಸ್ಪರ್ಶವೆಂಬ ಸಂತಾನಕ್ರಿಯೆಗಾಗಿ ಪ್ರಕೃತಿ ಎಂಥ ಆಟಗಳನ್ನು ಆಡುತ್ತಲ್ಲ ಎಂದು ವಿಸ್ಮಯಗೊಳ್ಳುತ್ತೇನೆ. ನಿಜಕ್ಕಾದರೆ, ಗುಲಾಬಿಯ ಎಸಳ ಮೇಲೆ ಕೂರುವ ದುಂಬಿಗೆ ಹೂವಿನ ಕೆಂಪು ಗಮನಕ್ಕೆ ಬರುವುದಿಲ್ಲ. ಯಾಕೆಂದರೆ ಅದಕ್ಕೆ ಬಣ್ಣಗುರುಡು. ಆದರೂ ಈ ಗಿಡ ಇಷ್ಟೊಂದು ವರ್ಣಮಯ ಹೂ ಬಿಟ್ಟಿದ್ದು ಯಾಕೆ? ಗಿಡಕ್ಕೂ ಸೌಂದರ್ಯಾಪೇಕ್ಷೆ ಇರಬಹುದೆ ಎಂದು ಚಕಿತನಾಗುತ್ತೇನೆ. ಇವೆಲ್ಲವೂ ಸೌಂದರ್ಯದ ವಿವಿಧ ಆಯಾಮಗಳೇ. ಇವನ್ನು ಯೋಚಿಸಲು ಕೇವಲ ರಸಿಕಹೃದಯ ಇದ್ದರೆ ಸಾಲದು, ವಿಜ್ಞಾನಿಯ ದೃಷ್ಟಿಯೂ ಇರಬೇಕು”. ವೈಜ್ಞಾನಿಕದೃಷ್ಟಿ ಮನುಷ್ಯನನ್ನು ಹೆಚ್ಚು ಮಾನವೀಯವಾಗಿ ಮಾಡುತ್ತದೆ ಎಂಬ ಕಾರಣಕ್ಕಾಗಿಯಾದರೂ ಅದನ್ನು ಬೆಳೆಸಿಕೊಳ್ಳಬೇಕು!

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...