ಮಹಾಶಿಲ್ಪಿ ಶ್ರೀ ಕಾಶೀನಾಥ್

ಶಿಲ್ಪಿ ಕಾಶೀನಾಥ್ ಎಂದೇ ಗುರುತಿಸಲ್ಪಡುವ ಕಾಶೀನಾಥ್ ಅವರು ಜನಿಸಿದ್ದು 1944ರ ಜ.2ರಂದು. ಶಿಕಾರಿಪುರ ಪಟ್ಟಣದಲ್ಲಿ ಕೃಷ್ಣರಾವ್ ಮತ್ತು ಪಾರ್ವತಮ್ಮ ದಂಪತಿಯ ಮೊದಲ ಮಗನಾಗಿ ಜನಿಸಿದ ಇವರು, ಓದಿದ್ದು ಪ್ರಾಥಮಿಕ ಶಿಕ್ಷಣ. ಶಾಲೆ ವಿದ್ಯಾಭ್ಯಾಸಕ್ಕಿಂತ ಕುಟುಂಬದ ಹಿರಿಯರಿಂದ ರಕ್ತಗತವಾಗಿ ಬಂದಿದ್ದ ಶಿಲ್ಪ ಕಲೆಯ ಕಡೆಗೇ ಕಾಶೀನಾಥ್ ಗಮನ ಹರಿಸಿದರು.
12ನೇ ವರ್ಷದಲ್ಲಿ ತಾತ ಪರಶುರಾಜಪ್ಪ ಅವರಿಂದ ಲೋಹ ಹಾಗೂ ಶಿಲ್ಪ ಕಲೆಯ ಪ್ರಾಥಮಿಕ ಶಿಕ್ಷಣ ಪಡೆದ ಕಾಶೀನಾಥ್ ನಂತರ ಕಾಷ್ಠ, ಮಣ್ಣು ಮತ್ತು ಸಿಮೆಂಟ್ನ ಕಲೆಗಳಲ್ಲಿ ಸಿದ್ಧಹಸ್ತರಾದರು. ನಂತರ ತಮಿಳುನಾಡಿಗೆ ತೆರಳಿ ಅಲ್ಲಿನ ನಾನಾ ಪ್ರಸಿದ್ಧ ದೇವಸ್ಥಾನಗಳ ಗೋಪುರ ಅಧ್ಯಯನ ನಡೆಸಿದರು.
ಆ ನಂತರ ಹೊಯ್ಸಳ ಹಾಗೂ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನೊಳಗೊಂಡ ತಮ್ಮದೇ ಆದ ಶೈಲಿಯನ್ನು ಆರಂಭಿಸಿದರು.
ಸಾಧನೆಯ ಪರಿಚಯ
ಕಾಶೀನಾಥ್‌ ಅವರು ಈ ತನಕ ನಾಡಿನ ನೂರಾರು ದೇವಸ್ಥಾನಗಳ ಗುಡಿ, ಗೋಪುರಗಳಿಗೆ ತಮ್ಮ ಕಲೆಯನ್ನು ಧಾರೆ ಎರೆದಿದ್ದಾರೆ. ಅವುಗಳಲ್ಲಿ ಬೃಹತ್‌ ಶಿಲ್ಪಗಳು ಪ್ರಮುಖವಾಗಿವೆ. ಮುರುಡೇಶ್ವರದಲ್ಲಿ 103 ಅಡಿ ಎತ್ತರದ ಧ್ಯಾನಸ್ಥ ಶಿವನ ಮೂರ್ತಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ಸಿದ್ಧಬಾರಿಯಲ್ಲಿ 35 ಅಡಿಯ ವೀರಾಂಜನೇಯ ಮೂರ್ತಿ, ಬೆಂಗಳೂರು ಏರ್‌ಪೋರ್ಟ್‌ ರಸ್ತೆಯ ಕೆಂಪ್‌ಪೋರ್ಟ್‌ನಲ್ಲಿ ಶಿವನ ಮೂರ್ತಿ, ನೆಲಮಂಗಲ ವಿಶ್ವಶಾಂತಿ ಆಶ್ರಮದಲ್ಲಿ 108 ಅಡಿ ಎತ್ತರದ ಗೀತೋಪದೇಶ ಹಾಗೂ 40 ಅಡಿ ಎತ್ತರದ ಶ್ರೀಕೃಷ್ಣನ ವಿಶ್ವರೂಪ ದರ್ಶನ ಸೇರಿವೆ.
ಅದೇ ರೀತಿ ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲೂ ಕಾಶೀನಾಥ್‌ ಹೆಸರು ಮಾಡಿದ್ದಾರೆ. ಕುಂದಾಪುರದ ಶ್ರೀ ಕುಂದೇಶ್ವರ, ಆನೆಗುಡ್ಡೆ ಶ್ರೀ ಗಣಪತಿ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, ಶಿವಮೊಗ್ಗದ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್‌, ಬಸವೇಶ್ವರ ದೇವಸ್ಥಾನ, ಹರಕೆರೆ ರಾಮೇಶ್ವರ ಸೇರಿದಂತೆ ನೂರಾರು ಗುಡಿ, ಗೋಪುರಗಳ ಹಾಗೂ ಶಿಖರ ನಿರ್ಮಾಣದಲ್ಲಿ ತಮ್ಮ ಕಲಾ ಪ್ರೌಢಿಮೆ ಸಾಬೀತುಪಡಿಸಿದ್ದಾರೆ.
ರಥ ಹಾಗೂ ದೇವರ ಮುಖವಾಡ ನಿರ್ಮಾಣದಲ್ಲೂ ಸಿದ್ಧಹಸ್ತರಾಗಿರುವ ಕಾಶೀನಾಥ್‌ ಅವರು, ಬೆಂಗಳೂರಿನ ವಸಂತ ವಲ್ಲಭರಾಯ ದೇವಸ್ಥಾನಕ್ಕೆ 15 ಅಡಿ ಎತ್ತರದ ರಥ, ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದಲ್ಲಿ 15 ಅಡಿ ಎತ್ತರದ ರಥ, ಕಾಪು ಮರಿಕಾಂಬ ದೇವಸ್ಥಾನಕ್ಕೆ ಬಂಗಾರದ ಮುಖವಾಡ ನಿರ್ಮಿಸಿದ್ದಾರೆ.
ಶಿವಮೊಗ್ಗದ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಗಣಪತಿ ದೇವಸ್ಥಾನದಲ್ಲಿ ಸುಮಾರು 50 ವರ್ಷಗಳ ಕಾಲ ಗಣಪತಿ ಹಬ್ಬದಲ್ಲಿ ಗಣಪತಿಯ ನಾನಾ ರೂಪಗಳನ್ನು ಒಳಗೊಂಡ ಆಕರ್ಷಕ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದಾರೆ.
ವಿದೇಶದಲ್ಲೂ ಹೆಸರು
ಅಮೆರಿಕದ ಬಾಲ್ಟಿಮೋರ್‌ನಲ್ಲಿ ಗಣಪತಿ ಹಬ್ಬದ ವೇಳೆ 5 ಅಡಿ ಎತ್ತರದ ನಾಟ್ಯ ಗಣೇಶ, ವಾಷಿಂಗ್ಟನ್‌ ಡಿಸಿಯಲ್ಲಿ ಚಿನ್ಮಯ ಮಿಷನ್‌ಗೆ ಮರದ ಮಂಟಪ ತಯಾರಿಸಿರುವುದು ಸೇರಿದಂತೆ ಅನೇಕ ಕಡೆ ತಮ್ಮ ಕಲಾ ನೈಪುಣ್ಯ ಮೆರೆದಿದ್ದಾರೆ.
ಶಿಲ್ಪಿ ಕಾಶಿನಾಥ್‌ ಅವರಿಗೆ ಪತ್ನಿ, ಇಬ್ಬರು ಗಂಡು ಹಾಗೂ ಒಬ್ಬ ಹೆಣ್ಣು ಮಗಳು ಇದ್ದಾರೆ. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಕಾಶೀನಾಥ್‌ ಕಲಾ ಮಂದಿರದಲ್ಲಿ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವ 72 ವರ್ಷದ ಕಾಶೀನಾಥ್‌ ಅವರಿಗೆ 2004ರಲ್ಲಿ ಜಕಣಾಚಾರಿ ಪ್ರಶಸ್ತಿ, 1998ರಲ್ಲಿ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಸಂದಿವೆ. ನಾಡಿನಾದ್ಯಂತ ನೂರಾರು ಸಂಘ, ಸಂಸ್ಥೆಗಳು ಅನೇಕ ಪ್ರಶಸ್ತಿ ಹಾಗೂ ಬಿರುದು ನೀಡಿ ಗೌರವಿಸಿವೆ.
---------------
ಪ್ರಶಸ್ತಿ ಸಂತಸ ತಂದಿದೆ
ಪ್ರಶಸ್ತಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಶಿಲ್ಪಿ ಕೆ.ಕಾಶೀನಾಥ್‌, ರಾಜ್ಯ ಸರಕಾರ ನೀಡುತ್ತಿರುವ ಈ ಪ್ರಶಸ್ತಿ ಸಂತಸ ತಂದಿದೆ. ಕಳೆದ ಆರು ದಶಕಗಳಿಂದ ಕಲಾ ಕ್ಷೇತ್ರದಲ್ಲಿ ತೊಡಗಿರುವ ತಮ್ಮನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಇದು ನನ್ನಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ನಾಡಿನ ಎಲ್ಲ ಸಂಘ, ಸಂಸ್ಥೆಗಳಿಗೆ ಸಲ್ಲುವಂತಹುದು ಎಂದರು

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...