ಕಲಾವಿದ ಜಿನೇಂದ್ರ ಎಮ್ ಎಮ್

*#ಕಲಾವಿದ_ಜಿನೇಂದ್ರ_ಎಮ್_ಎಮ್*

ಇತ್ತೀಚೆಗೆ‌ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕವು ಬಹಳ ವೈಭವದಿಂದ ನಡೆಯಿತು. ಈ ಕಾರ್ಯಕ್ರಮಕ್ಕೆ ಹೋದವರು ಕಲಾವಿದ ಜಿನೇಂದ್ರ ಅವರನ್ನು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಕಂಡೇ ಇದ್ದಾರೆ. ಇಲ್ಲಿ ಪ್ರತ್ಯಕ್ಷವಾಗಿ ಎಂದರೆ ಮುಖತಃ ಭೇಟಿಯಾಗಿರಬಹುದು. ಪರೋಕ್ಷವಾಗಿ ಎಂದರೆ ಅವರ ಕಲಾ ವೈಭವದ ಪ್ರತೀಕವಾಗಿ ಮೂಡಿಬಂದಿದ್ದ ಸರ್ವತೋಭದ್ರ ಅರಮನೆ ಹಾಗೂ ಭಗವಾನ್ ಬಾಹುಬಲಿ ವಿಗ್ರಹ ಮತ್ತು ಸಮವಸರಣ. ಸಮವಸರಣ ಹಾಗೂ ವೇದಿಕೆಯನ್ನು ನೋಡಿದ ಎಲ್ಲರೂ ಕಲಾವಂತನ ಕಲಾನೈಪುಣ್ಯವನ್ನು ಹಾಡಿ ಕೊಂಡಾಡಿದರು. ಈ ಅದ್ಭುತ ಕಲಾಪ್ರವೀಣ ಯಾರೆಂದರೆ ಜಿನೇಂದ್ರ ಎಮ್ ಎಮ್ ಅಥವಾ ಚಿತ್ತ ಜಿನೇಂದ್ರ.

ಶ್ರವಣಬೆಳಗೊಳದಲ್ಲಿ ವೈಭವದ  ಮಹಾಮಸ್ತಕಾಭಿಷೇಕ.‌ ಕಿಲೋಮೀಟರ್ ದೂರದ ಮೆರವಣಿಗೆ. ಅದರಲ್ಲಿ ವೈಭವೋಪೇತ ಟ್ಯಾಬ್ಲೋಗಳು.  ಆ ಟ್ಯಾಬ್ಲೋಗಳಲ್ಲಿ ಚಾರು ಕಾಯ ಕಲ್ಪವೆಂಬ ಟ್ಯಾಬ್ಲೋ ಅತ್ಯಂತ ಹೆಚ್ಚು ಮನಸೂರೆಗೊಂಡಿತು. ಇದರ ನಿರ್ಮಾತೃ ಬೇರಾರು ಅಲ್ಲ ನಮ್ಮವರೇ ಆದ ಜಿನೇಂದ್ರ ಎಮ್ ಎಮ್. 

*#ಕಲಾ_ಆರಾಧಕ*

ಅಡಿಕೆ, ಭತ್ತ , ಕಬ್ಬು , ಶುಂಠಿ ಬೆಳೆಯುವ ಹಚ್ಚ ಹಸುರಿನ ಕಾನನದ ಮಡಿಲಲ್ಲಿ ಇರುವ ಸಾಗರ ತಾಲ್ಲೂಕಿನ ಜಿನೇಂದ್ರರವರು ಬಾಲ್ಯದಿಂದಲೇ ಕಲಾರಾಧಕರು.  ಮನುಷ್ಯನಿಗೆ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಹಾಗೆಯೇ ಜಿನೇಂದ್ರ ಅವರಿಗೆ ಕಲಾ ಪ್ರಪಂಚ ಕೈಬೀಸಿ ಕರೆಯಿತು. ಕಲಾ ಪ್ರಪಂಚದ ಕಿರು ಬಾಗಿಲ ಮೂಲಕ ಪ್ರವೇಶಿಸಿದ ಜಿನೇಂದ್ರರವರು ತನ್ನ ಕಲಾ ನೈಪುಣ್ಯದ ಧಾರೆಯಲ್ಲಿ ಕಲಾ ರಸಿಕರನ್ನು ರೋಮಾಂಚಿತಗೊಳಿಸಿದರು. ಆರಂಭದ ದಿನಗಳಲ್ಲಿ ತೇಜೋಹಾರಿಯಾದ ಪ್ರಕೃತಿಯತ್ತ ವಾಲಿದ ಜಿನೇಂದ್ರರವರು ತಮ್ಮದೇ ಶೈಲಿಯಲ್ಲಿ ತೊಡಗಿಸಿ ಯಶಸ್ವಿ ಆದರು. ಕ್ರಮೇಣವಾಗಿ ರೇಖಾಚಿತ್ರಗಳತ್ತ ಮನಸ್ಸು ಹರಿಸಿದರು. ರೇಖಾಚಿತ್ರಗಳ ಜೊತೆಗೆ ಮ್ಯೂರಲ್ ಗಳು ಶಿಲ್ಪಗಳು ರಚನಾತ್ಮಕವಾಗಿ ಮೂಡಿಬಂದವು. ಕಲಾಕಾರನಿಗೆ  ಕಲಾರಸಿಕರ ಬೆಂಬಲ ಸಿಕ್ಕಿದರಂತೂ ಕಲಾವಿದನ ವೈಭವ ರಸಿಕರ ಹೃದಯ ಮುಟ್ಟುತ್ತದೆ. 

*#ಕಲಾ_ರಸಿಕರ_ಅಭಿವಾದನೆ*

ಕಲಾವಿದನಿಗೆ ಬೆಂಬಲ , ಪ್ರೋತ್ಸಾಹ ಸಿಕ್ಕಾಗ ಕಲಾವಿದನ ಕಲಾವಂತಿಕೆ‌ ದೇದಿಪ್ಯಮಾನವಾಗಿರುತ್ತದೆ. ಅಂತರಾಷ್ಟ್ರೀಯ ಕಲಾವಿದ ವಿಮರ್ಶಕ ಚಿ ಸೂ ಕೃಷ್ಣ ಶೆಟ್ಟಿ ಅವರ ಸಾಂಗತ್ಯದಲ್ಲಿ ಜಿನೇಂದ್ರರ ಕಲಾಸಕ್ತಿಯ ಚಿಗುರು ಮರವಾಗಿ ಬೆಳೆಯಲು ಅನುವಾಯಿತು.  ಖ್ಯಾತ ಕಲಾ ವಿಮರ್ಶಕರಾದ ಎಂ ಎಸ್ ಮೂರ್ತಿ ಹಾಗೂ ಕೆ ವಿ ಸುಬ್ರಹ್ಮಣ್ಯ ಅವರುಗಳ ಜಿನೇಂದ್ರ ಅವರ ಕಲಾಕೃತಿಗಳನ್ನು ಕಂಡು ಮನದೂಗಿ ಕಲಾವಿದನ ಕಲಾ ನೈಪುಣ್ಯವನ್ನು ಕಂಡು ಅನುಭವಿಸಿ ಹಾಡಿ ಕೊಂಡಾಡಿದರು. ಸಾಧಕನಿಗೆ ಸಮಾಜದಿಂದ ಗೌರವ ಮನ್ನಣೆ ಸಿಕ್ಕೇ ಸಿಗುತ್ತದೆ. *#ತ್ರಿಭುವನ_ಕಲಾ_ಪ್ರಶಸ್ತಿ* ಮೂಡಬಿದಿರೆ ಜೈನ ಮಠದಿಂದಲೂ, *#ಆದರ್ಶ_ಯುವ_ಪ್ರಶಸ್ತಿ* ಶ್ರವಣಬೆಳಗೊಳದಿಂದ, *#ಶಂಕರ್_ನಾಗ್* ಪ್ರಶಸ್ತಿ ಜಿನೇಂದ್ರರ ಯಶಸ್ಸಿನ ಕಿರೀಟಕ್ಕೆ ಗರಿಯಾಗಿ ಸೇರಿಕೊಂಡಿದೆ. ನಾಡಿನ ಹತ್ತು ಹಲವು ಸಂಘ ಸಂಸ್ಥೆಗಳು ಜಿನೇಂದ್ರರ ಕಲಾವಂತಿಕೆಯನ್ನು ಗುರುತಿಸಿ ಮಾನ್ಯ ಮಾಡಿವೆ. 

*#ಜಿನೇಂದ್ರರ_ಬಹುಮುಖ*

ಸಾಗರ ತಾಲ್ಲೂಕಿನ ಮಳ್ಳೋಡಿಯ ಮೇಘರಾಜ್ ಲೀಲಾವತಿ ದಂಪತಿಗಳ ಮಗನಾಗಿ ಜನಿಸಿ ನಿಸರ್ಗದ ಆರಾಧಕನಾಗಿ ಬಿ ಎಫ್ ಎ ಪದವಿ ಪಡೆದಿದ್ದಾರೆ. ಖ್ಯಾತ ಚಿತ್ರ ಕಲಾವಿದ ಎಸ್ ಆರ್ ವೆಂಕಟೇಶ್ ಅವರ ಗರಡಿಯಲ್ಲಿ ಪಳಗಿ ಮಹಾಶಿಲ್ಪಿ ಕಾಶೀನಾಥರ  ಒಡನಾಟ ದೊರೆಯಿತು. *#ಚಿತ್ತಾ_ಆರ್ಟ್_ಸ್ಟುಡಿಯೋ* ಸ್ಥಾಪಿಸಿ ಹಲವು ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. KGF ಚಲನಚಿತ್ರದ ಮಾರಿ ವಿಗ್ರಹ ನಮ್ಮ ಜಿನೇಂದ್ರರ ಕೈ ಚಳಕದಿಂದ ಮೂಡಿಬಂದಿದೆ. ಹಲವಾರು ಸಿನೆಮಾಗಳಲ್ಲಿ ತನ್ನ ಕೈಚಳಕದ ಕಲಾ ವೈಭವವನ್ನು ನಿರೂಪಿಸಿದ್ದಾರೆ. ರಾಜಕಾರಣಿಗಳ ಕುಟುಂಬದ ಮದುವೆಯ ವೈಭವೋಪೇತ ಸಮಾರಂಭದಲ್ಲಿ ಜಿನೇಂದ್ರರ ಕಲಾ ವೈಭವ ಸಾಕ್ಷಿಯಾಗಿದೆ. ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆಯ ಲೋಗೋ , ಬೆಂಗಳೂರು ಅರಮನೆ ಮೈದಾನದಲ್ಲಿ 125 ಅಡಿ ಎತ್ತರದ ಶ್ರೀ ಧನ್ವಂತರಿ ಮಾತೆಯ ವಿಗ್ರಹ, ಪೂಜ್ಯ ಶಾಂತಿಸಾಗರ ಮುನಿಮಹಾರಾಜರ ವಿಗ್ರಹ,  ಉದಯ ಟಿವಿಯ ಹರಟೆ ಕಾರ್ಯಕ್ರಮದ ಕಲಾ ನಿರ್ದೇಶಕನಾಗಿ, ಜಿನಸಮ್ಮಿಲನದ ಕಾರ್ಯಕ್ರಮದಲ್ಲಿ ಯಶಸ್ಸಿನಲ್ಲಿ ಇವರ ಪಾತ್ರವೂ ಇದೆ. ವಿಶ್ವವಿಖ್ಯಾತ ಮೈಸೂರು ದಸರದಲ್ಲಿ ಟ್ಯಾಬ್ಲೋಗಳ ನಿರ್ಮಾಣ ಮಾಡಿ ದೇಶ ವಿದೇಶದ ಕಲಾರಸಿಕರ ಮೆಚ್ಚುಗೆ ಪಡೆದಿದ್ದಾರೆ. ಮಹಾಮಾರಿ ಕೊರೋನದ ಸಮಯದಲ್ಲಿ ಜನ ಜಾಗೃತಿಗಾಗಿ ವಿಶಿಷ್ಟವಾದ ಹೆಲ್ಮೆಟ್ ತಯಾರಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಶಿವಕುಮಾರ ಸ್ವಾಮಿಗಳ ವಿಗ್ರಹ ಇನ್ನೂ ಮುಂತಾದ ಅನೇಕ ಕಲಾಕೃತಿಗಳನ್ನು ರಚಿಸಿ ರಾಜ್ಯದ ಗಮನಸೆಳೆದಿದ್ದಾರೆ. ಕೊರೋನದ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಜೈನ ಸಂಘಟನೆಗಳ ಜೊತೆಗೂಡಿ ನೆರವಿನ ಹಸ್ತ ಚಾಚುತ್ತಿರುವುದು ಜಿನೇಂದ್ರರ ಮಾನವೀಯತೆಯ ಪ್ರತೀಕವಾಗಿದೆ.

*#ಅಹಂ_ಇಲ್ಲದ_ಸರಳವಂತ*

ಇಷ್ಟೊಂದು ಸಾಧನೆಯ ಪಥದಲ್ಲಿದ್ದರೂ ಒಂದಿನಿತೂ ಅಹಂ ಇಲ್ಲದ ಸರಳ ವ್ಯಕ್ತಿಯಾಗಿದ್ದಾರೆ. ಪ್ರತಿಯೊಬ್ಬ ಪ್ರತಿಭಾವಂತರನ್ನು ಗುರುತಿಸಿ ಬೆಂಬಲ ಕೊಡುವ ಅವರ ಸರಳತೆಗೆ ಸಾಕ್ಷಿಯಾಗಿದೆ. ತನ್ನ ಸವಿ ನಿರ್ಮಲ ಮಾತುಗಳಿಂದ ಜನಮಾನಸದಲ್ಲಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ವ್ಯಕ್ತಿತ್ವ ಜಿನೇಂದ್ರ ಎಂ ಎಂ ಅವರದ್ದು. ಇನ್ನು ಮುಂದಕ್ಕೂ ಜಿನೇಂದ್ರರ ಕಲಾವಂತಿಕೆ ಹೆಮ್ಮರವಾಗಿ ಬೆಳೆದು ಈ ನಾಡಿಗೆ ನೆರಳಾಗಲಿ ಎಂದು ಆಶಿಸೋಣ. 

*#ನಿರಂಜನ್_ಜೈನ್_ಕುದ್ಯಾಡಿ_ಅಳದಂಗಡಿ*
9945563529.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...